ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ‘ಲವ್ ಜಿಹಾದ್’ ಪದ ಬಳಕೆ ಅರ್ಥಹೀನ: ಖುರೇಷಿ ಗರಂ

‘ಲವ್ ಜಿಹಾದ್’ ಪದ ಬಳಕೆ ಅರ್ಥಹೀನ: ಖುರೇಷಿ ಗರಂ

Thu, 05 Nov 2009 21:45:00  Office Staff   S.O. News Service
ಭಟ್ಕಳ, ನವೆಂಬರ್ 5:  ಲವ್ವಿಗೂ ಜಿಹಾದ್‌ಗೂ ಒಂದಕ್ಕೊಂದು ಸಂಬಂಧವೇ ಇಲ್ಲ. ಆದರೂ ಕೆಲವರು ಲವ್ ಜೆಹಾದ್ ಎಂದು ಕರೆದು ಕೊಳ್ಳುತ್ತ ಅಪಾರ್ಥವನ್ನು ಸೃಷ್ಟಿಸುತ್ತಿದ್ದಾರೆ ಎಂದು ಅಲ್ಪ ಸಂಖ್ಯಾತ ಆಯೋಗದ ರಾಜ್ಯಾಧ್ಯಕ್ಷ ಖುಸ್ರೋ ಖುರೇಷಿ ಕಿಡಿ ಕಾರಿದ್ದಾರೆ.

ಅವರು ಅಲ್ಪ ಸಂಖ್ಯಾತರ ಸಮಸ್ಯೆಗಳನ್ನು ಆಲಿಸಲು ಭಟ್ಕಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಂಜಾವಿನ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಇಸ್ಲಾಮ್ ಧರ್ಮದಲ್ಲಿ ಜಿಹಾದ್‌ಗೆ ಅದರದ್ದೇ ಆದ ಅರ್ಥವಿದೆ. ಅದನ್ನು ಈ ಪ್ರೀತಿಯೊಂದಿಗೆ ಜೋಡಿಸುವುದು ಅಕ್ಷಮ್ಯ ಎಂದ ಅವರು ದೇಶಾದ್ಯಂತ ಕೇಳಿ ಬರುತ್ತಿರುವ ಗೋಹತ್ಯೆ, ಭಯೋತ್ಪಾದನೆ, ಮತಾಂತರ ಹಾಗೂ ನಿರುದ್ಯೋಗದ ಕುರಿತು ಗಂಭೀರವಾದ ಚರ್ಚೆ ನಡೆಸಲು ಆಯೋಗ ತಯಾರಿ ನಡೆಸಿದೆ ಎಂದು ವಿವರಿಸಿದರು. ಈ ಸಂಬಂಧ ಆರೆಸ್ಸೆಸ್, ಭಜರಂಗದಳದಂತಹ ಸಂಘಟನೆಗಳ ಜೊತೆಗೆ ಚರ್ಚೆ ನಡೆಸಿ ಸಾಮರಸ್ಯ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಅಧ್ಯಕ್ಷರು ಅಲ್ಪ ಸಂಖ್ಯಾತರು ಶಿಕ್ಷಣವನ್ನು ಪಡೆದುಕೊಂಡು ಮುಂದೆ ಬರಬೇಕಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
 
ಸಾಚಾರ್ ವರದಿಯಲ್ಲಿ ಹೊಸತೇನಿಲ್ಲ
 
ದೇಶದ ಮುಸ್ಲೀಮರ ಸ್ಥಿತಿಗತಿಯ ಬಗ್ಗೆ ಸಾಚಾರ್ ಸಮಿತಿ ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೊಸತೇನಿಲ್ಲ ಎಂದು ಖುಸ್ರೋ ಖುರೇಷಿ ಮತ್ತೊಮ್ಮೆ ಟೀಕಿಸಿದ್ದಾರೆ. ಈ ಕುರಿತು ಹಿಂದೆ ಸಲ್ಲಿಸಲಾದ ವರದಿಯ ಅಂಶಗಳನ್ನೇ ಸಾಚಾರ್ ಸಮಿತಿ ಹೊಂದಿದೆ ಎಂದು ಹೇಳಿರುವ ಅವರು ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಿ ಹಂತಹಂತವಾಗಿ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು. ಕರಾವಳಿಯಲ್ಲಿ ಅಲ್ಪಸಂಖ್ಯಾತರು ಅಭದ್ರತೆಯ ಭಾವನೆಯನ್ನು ಹೊಂದುತ್ತಿರುವುದರ ಕುರಿತು ಮಾತನ್ನು ಹೊರಳಿಸಿದ ಅವರು, ಈ ಬಗ್ಗೆ ಈಗಲೇ ಏನನ್ನೂ ಹೇಳುವುದಿಲ್ಲ. ಅದನ್ನು ಚರ್ಚಿಸಲಿಕ್ಕಾಗಿಯೇ ಇಲ್ಲಿಗೆ ಬಂದಿರುವುದಾಗಿ ಹೇಳಿದರು. 
 


Share: